ರಾಜ್ಯಕ್ಕೆ ಅಚ್ಛೇದಿನ್ ಯಾವಾಗ ಬರುತ್ತೆ?, ಬಿಎಸ್‌ವೈ ಉತ್ತರ ಹೇಳಿದ್ರು!


ದಾವಣಗೆರೆ, ಡಿಸೆಂಬರ್ 27 : ‘ಸಿದ್ದರಾಮಯ್ಯ ಅವರೇ ಕರ್ನಾಟಕದ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿ, ಮನೆಗೆ ಕಳಿಸಿದ ಮೇಲೆ ನಮ್ಮ ರಾಜ್ಯಕ್ಕೆ ಅಚ್ಛೇದಿನ್ ಬರುತ್ತದೆ’ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶ ಬುಧವಾರ ದಾವಣಗೆರೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಿತು. ಬಿ.ಎಸ್.ಯಡಿಯೂರಪ್ಪ, ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮುಂತಾದವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶ ಉದ್ದೇಶಿಸಿ ಮಾತನಾಡಿ ಯಡಿಯೂರಪ್ಪ, ‘ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಏಕೆ ಅವಕಾಶ ನೀಡಲಿಲ್ಲ?. ರೈತರನ್ನು ಕರೆದುಕೊಂಡು ಬಂದು ಬಿಜೆಪಿ ಕಚೇರಿ ಮುಂದೆ ನೀವು ಪ್ರತಿಭಟನೆ ಮಾಡಿಸಲಿಲ್ಲವೇ?’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.


ಹುಬ್ಬಳ್ಳಿ ಅಥವ ನವಲಗುಂದದಲ್ಲಿ 1 ಲಕ್ಷ ರೈತರನ್ನು ಸೇರಿಸುವೆ. ಆ ವೇದಿಕೆಗೆ ನೀವು ಬನ್ನಿ ಸಿದ್ದರಾಮಯ್ಯ ಅವರೇ ರಾಜ್ಯದ ರೈತರಿಗೆ ಯಾರು ಹೆಚ್ಚು ಕೊಡುಗೆ ನೀಡಿದ್ದಾರೆ? ಎಂಬುದನ್ನು ಅಲ್ಲಿಯೇ ಚರ್ಚೆ ಮಾಡೋಣ’ ಎಂದು ಸವಾಲು ಹಾಕಿದರು. ಹೊನ್ನಾಳಿ ಕ್ಷೇತ್ರದಲ್ಲಿ 2008ರ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದ ಎಂ.ಪಿ.ರೇಣುಕಾಚಾರ್ಯ ಅವರು 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಡಿ.ಜಿ.ಶಾಂತನಗೌಡ ವಿರುದ್ಧ ಸೋಲು ಅನುಭವಿಸಿದ್ದರು.

150ರಲ್ಲಿ ಹೊನ್ನಾಳಿ ಕ್ಷೇತ್ರವೂ ಸೇರಿದೆ
ಸಮಾವೇಶದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ‘ಕಳೆದ ಚುನಾವಣೆಯಲ್ಲಿ ಆಕಸ್ಮಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗಿದೆ. 2018ರ ಚುನಾವಣೆಯಲ್ಲಿ ಹೊನ್ನಾಳಿಯಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯದಲ್ಲಿ ಪಡೆಯುವ 150 ಸ್ಥಾನದಲ್ಲಿ ಹೊನ್ನಾಳಿಯೂ ಒಂದಾಗಲಿದೆ’ ಎಂದರು.

ನಾಲ್ಕು ತಿಂಗಳ ಸಮಯ ಕೊಡಿ
ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ‘ಕ್ಷೇತ್ರದ ಯುವಕರು ನಾಲ್ಕು ತಿಂಗಳ ಸಮಯ ಕೊಡಿ. ಪ್ರತಿ ಬೂತ್‌ನಲ್ಲಿ ಕನಿಷ್ಠ 70 ಶೇ ಓಟು ಬರುವಂತೆ ಕೆಲಸ ಮಾಡಿ’ ಎಂದು ಕರೆ ನೀಡಿದರು.
ಅಚ್ಛೇದಿನ್ ಯಾವಾಗ ಬರುತ್ತದೆ?
‘ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಅಚ್ಚೇದಿನ್ ಯಾವಾಗ ಬರುತ್ತದೆ? ಎಂದು ನನ್ನನ್ನು ಕೇಳುತ್ತಾರೆ. ಕರ್ನಾಟಕದ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿ ಮನೆಗೆ ಕಳಿಸಿದಾಗ ರಾಜ್ಯಕ್ಕೆ ಅಚ್ಚೇದಿನ್ ಬರುತ್ತದೆ’ ಎಂದು ಯಡಿಯೂರಪ್ಪ ಹೇಳಿದರು.

ರೇಣುಕಾಚಾರ್ಯರಿಗೆ ಓಟು ಕೊಡಿ
ಸಮಾವೇಶದಲ್ಲಿ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಅವರು ಎಂ.ಪಿ.ರೇಣುಕಾಚಾರ್ಯ ಅವರಿಗೆ ಓಟು ಕೊಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿದರು.
Credits:Kannadaoneindia

You may also like...