‘ಬಿಜೆಪಿ ಗೆಲ್ಲದಿದ್ದರೆ ನನ್ನನ್ನು ಯಡಿಯೂರಪ್ಪ ಎನ್ನಬೇಡಿ’

ಯಾದಗಿರಿ, ಡಿಸೆಂಬರ್ 09: ‘ಈ ಬಾರಿ ಬಿಜೆಪಿಯನ್ನು ಗೆಲ್ಲಿಸದಿದ್ದರೆ ನನ್ನನ್ನು ಯಡಿಯೂರಪ್ಪನೆಂದೇ ಕರೆಯಬೇಡಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಗುರುಮಠಕಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಭೆಯಲ್ಲಿ ವೀರಾವೇಶದಿಂದ ಮಾತನಾಡಿದ ಯಡಿಯೂರಪ್ಪ ಅವರು ‘ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಹೇಳ ಹೆಸರಿಲ್ಲದಂತೆ ಮಾಡುತ್ತೇನೆ’ ಎಂದು ಅಬ್ಬರಿಸಿದರು. ‘ರಾಜ್ಯ ಚುನಾವಣೆ ಬಗ್ಗೆ ಬಂದಿರುವ ಎಲ್ಲ ಸಮೀಕ್ಷೆಗಳು ಸುಳ್ಳಾಗುವಂತೆ ಫಲಿತಾಂಶ ಬರಲಿದೆ, ಕಾಂಗ್ರೆಸ್ ನಾಯಕರು ಓಡಾಡಲು ಕೂಡ ಜಾಗವಿಲ್ಲದಂತೆ ಮಾಡುತ್ತೇವೆ’ ಎಂದರು.


ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರಲು ಮುಖಂಡರು ಸಾಲುಗಟ್ಟಿ ನಿಂತಿದ್ದಾರೆ, ಆದರೆ ಬಿಜೆಪಿ ಯಿಂದ ಒಬ್ಬರೂ ಹೋಗಲ್ಲ' ಎಂದರು.
'ಗುಜರಾತ್ ಚುನಾವಣೆ ಗೆಲ್ಲುತ್ತೇವೆ, ಹಿಮಾಚಲ ಈಗಾಗಲೇ ಗೆದ್ದಿದ್ದೇವೆ ಉಳಿದಿದ್ದು ಕರ್ನಾಟಕ ಇಲ್ಲಿಯೂ 150 ಸೀಟು ಪಡೆದು ಅಧಿಕಾರಕ್ಕೆ ಬರುತ್ತೇವೆ' ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಅವರು "ಬಿಜೆಪಿ ಸಮೀಕ್ಷೆ ನಡೆಸಿ ಅಭ್ಯರ್ಥಿ ಗಳಿಗೆ ಟಿಕೇಟ್ ನೀಡಲಿದೆ, ಗೆಲ್ಲುವ ಅಭ್ಯರ್ಥಿಗಳಿಗಷ್ಟೆ ಈ ಬಾರಿ ಟಿಕೆಟ್' ಎಂದರು. ಶಾಸಕ ಬಾಬುರಾವ್ ಚಿಂಚನಸೂರ ಅವರ ಮೇಲೆ ಹರಿಹಾಯ್ದ ಅನಂತಕುಮಾರ್ " ಚಿಂಚನಸೂರ ಅವರು ವಲಸೆ ಹಕ್ಕಿ, ಅಂತಹ ಕಲಾಕಾರ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ' ಎಂದರು. ಕಾಂಗ್ರೆಸ್ ಅವರು ಒಡ್ಡುವ ಆಮಿಷಗಳಿಗೆ ಬಲಿಯಾಗಬೇಡಿ ಎಂದ ಅವರು 'ಕಾಂಗ್ರೆಸ್ ನ ನೋಟ್, ಪ್ಯಾಕೆಟ್ ಗೆ ಓಟ ಹಾಕಬೇಡಿ, ಅಭಿವೃದ್ಧಿ ಗಾಗಿ ಬಿಜೆಪಿ ಅಭ್ಯರ್ಥಿಗೆ ಗೆಲ್ಲಿಸಿ, ಬಿಎಸ್ ಯಡಿಯೂರಪ್ಪ ಅವರು ಅಭಿವೃದ್ಧಿ ಹರಿಕಾರರು, ಅವರಿಗೆ ಈ ಬಾರಿ ಮತ ನೀಡಿ' ಎಂದು ಮನವಿ ಮಾಡಿಕೊಂಡರು. 'ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ, ಗುಜರಾತ್ ನಲ್ಲಿ 5 ನೇ ಭಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಇಲ್ಲಿಯೂ ಕಾಂಗ್ರೆಸ್ ಅನ್ನು ಧೂಳಿಪಠ ಮಾಡಿ, ಅವರ ಪಾಪಗಳಿಗೆ ಶಿಕ್ಷೆ ನೀಡಿ' ಎಂದರು.
Source

You may also like...